ತಾರೇಮರ   
	ಕಾಂಬ್ರಿಟೇಸೀ ಕುಟುಂಬಕ್ಕೆ ಸೇರಿದ ಒಂದು ಕಾಡುಮರ. ಟರ್ಮಿನೇಲಿಯ ಬೆಲ್ಲರಿಕ ಇದರ ಶಾಸ್ತ್ರೀಯ ಹೆಸರು. ಇದಕ್ಕೆ ಬೆಲ್ಲರಿಕ್ ಮೈರಾಬಲನ್ ಎಂಬ ವಾಣಿಜ್ಯನಾಮವೂ ಉಂಟು. ಇದು 60'-80' ಎತ್ತರಕ್ಕೆ ಬೆಳೆಯುವ ಬೃಹದ್ಗಾತ್ರದ ಮರ ; ಇದರ ಕಾಂಡ ನೇರವಾಗಿ ಬೆಳೆಯುತ್ತದೆ. ಬಣ್ಣ ತಿಳಿಹಳದಿ. ಎಲೆಗಳು ಉದ್ದ 3'-5' ; ಅಗಲ 3'-5' ; ಆಕಾರ ದೀರ್ಘ ಅಂಡಾಕಾರದಂತೆ. ಎಲೆಗಳು ಎಳೆಯವಾಗಿದ್ದಾಗ ತಾಮ್ರವರ್ಣದವಾಗಿದ್ದು ಬಲಿತಂತೆ ಹಸಿರುಬಣ್ಣಕ್ಕೆ ತಿರುಗುವುವು.  ತಾರೇಮರ ಪರ್ಣಪಾತಿ (ಡೆಸಿಡ್ಯುಅಸ್) ಬಗೆಯದು. ಇದರ ಎಲೆಗಳೆಲ್ಲ ಮಾರ್ಚ್ ತಿಂಗಳ ಸುಮಾರಿನಲ್ಲಿ ಉದುರಿಬಿಡುವುವು. ಇದೇ ವೇಳೆಗೆ ಹೂಗಳು ಅರಳಲು ಪ್ರಾರಂಭಿಸುವುವು. ಹೂಗಳು ಎಲೆಗಳ ಕಂಕುಳಲ್ಲಿ 3" - 6" ಉದ್ದದ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಹೂಗಳ ಬಣ್ಣ ಹಳದಿ ಇಲ್ಲವೆ ಕೆಂಪುಮಿಶ್ರಿತ ಬಿಳಿ. 

	ಭಾರತದ ಎಲ್ಲ ಅರಣ್ಯ ಪ್ರದೇಶಗಳಲ್ಲೂ ವಿಶೇಷವಾಗಿ ಸಾಲುವೃಕ್ಷ ಕಾಡುಗಳಲ್ಲೂ ಕಣಿವೆ ಪ್ರದೇಶಗಳಲ್ಲೂ ತಾರೇಮರಗಳನ್ನು ಕಾಣಬಹುದು. ಸಮುದ್ರ ಮಟ್ಟದಿಂದ 3,000' ವರೆಗಿನ ಪ್ರದೇಶಗಳಲ್ಲಿ (ಸಿಂಧ್ ಮತ್ತು ರಾಜಸ್ಥಾನದ ಮರುಭೂಮಿ ಪ್ರದೇಶಗಳನ್ನು ಬಿಟ್ಟು) ಈ ಸಸ್ಯಗಳು ಬೆಳೆಯುತ್ತವೆ. ಅಲ್ಲದೆ ಶ್ರೀಲಂಕಾ ಮತ್ತು ಮಲೇಷ್ಯ ಪ್ರದೇಶಗಳಲ್ಲೂ ಇವುಗಳ ವ್ಯಾಪ್ತಿ ಉಂಟು. ಭಾರತದಲ್ಲಿ ವಿಶೇಷವಾಗಿ ಬಂಗಾಳ, ಛೋಟಾ ನಾರಪುರ ಮತ್ತು ಚಿತ್ರಗಾಂಗ್ ಪ್ರದೇಶಗಳಲ್ಲಿ ಬೆಳೆಯುತ್ತದೆ. ಅನೇಕ ಕಡೆ ಸಾಲುಮರವಾಗಿ ಬೆಳೆಯುವ ಕ್ರಮವೂ ಉಂಟು. ತಾರೇಮರಕ್ಕೆ ಹಲವಾರು ಉಪಯುಕ್ತ ಗುಣಗಳುಂಟು. ಇದರ ಚೇಗುಭಾಗ, ತೊಗಟೆ ಮತ್ತು ಹಣ್ಣುಗಳಲ್ಲಿ ಎಲಾಜಿಕ್ ಆಮ್ಲವೂ ಬೀಜದ ಹೊರಕವಚದಲ್ಲಿ ಗ್ಯಾಲಿಕ್ ಆಮ್ಲವೂ ಇವೆ. 

	ರಕ್ತ ಸೋರುವಿಕೆಯನ್ನು ನಿಲ್ಲಿಸುವುದಕ್ಕೆ, ಮೂಲವ್ಯಾಧಿ, ಮಹೋದರ, ಕುಷ್ಠ, ಪಿತ್ತವಿಕಾರ ಮುಂತಾದ ಕಾಯಿಲೆಗಳ ಚಿಕಿತ್ಸೆಗೆ ತಾರೇಮರದ ಹಣ್ಣನ್ನು ಬಳಸುವುದಿದೆ.  ಅಲ್ಲದೆ ಇದು ಬಲವರ್ಧಕವೂ ಹೌದು. ಆದರೆ ಹೆಚ್ಚು ಹಣ್ಣು ತಿಂದರೆ ತಲೆ ಸುತ್ತುವುದು, ನಿದ್ರೆ ಬರುವುದು ಮುಂತಾದ ವಿಕಾರಗಳು ಉಂಟಾಗುತ್ತವೆ ಎಂದು ಹೇಳಲಾಗಿದೆ. ಹಣ್ಣಿನಿಂದ ಶಾಯಿಯನ್ನು ತಯಾರಿಸುವುದೂ ಇದೆ. ಚÀರ್ಮವನ್ನು ಹದ ಮಾಡಲು ಉಪಯೋಗಿಸುವುದುಂಟು. ತಾರೇಮರದಿಂದ ಗೋಂದನ್ನು ಪಡೆಯಬಹುದು. ಕೆಮ್ಮು ಮತ್ತು ಗಂಟಲು ಕಟ್ಟಿ ಒಡೆದ ಧ್ವನಿಗೆ ಪರಿಹಾರವಾಗಿ ಇದನ್ನು ಉಪಯೋಗಿಸುತ್ತಾರೆ. ತಾರೇಮರದ ದಿಮ್ಮಿ ಅಷ್ಟಾಗಿ ಹೆಚ್ಚು ಬಾಳಿಕೆ ಬರುವುದಿಲ್ಲವಾದ್ದರಿಂದ ಹಗುರವಾದ ಗುಡಿಸಲುಗಳನ್ನು ಕಟ್ಟಲು ಮಾತ್ರ ಇದನ್ನು ಉಪಯೋಗಿಸುತ್ತಾರೆ. 	     (ಕೆ,ಎಸ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ